3ನೇ ತರಗತಿ ಓದಿರುವ, ಚಹಾ ಮಾರುತ್ತಿದ್ದ ಈ ಪಕ್ಷೇತರ ಅಭ್ಯರ್ಥಿಯ ಆಸ್ತಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರ!

0
852

ನ್ಯೂಸ್ ಕನ್ನಡ ವರದಿ : ಅದೃಷ್ಟ ಒಲಿದರೆ ಕಸವು ಕೂಡ ರಸ ಅಂದಹಾಗೆ, ಮೂಲತಃ ಕೇರಳದವರಾದ ಪಿ.ಅನಿಲ್‌ಕುಮಾರ್‌ 43 ವಷ೯ ಪ್ರಾಯದ ಕೋಟ್ಯಾಧಿಪತಿ ಯುವಕ. ಮೂರನೇ ತರಗತಿವರೆಗೆ ಓದಿ ಬರೋಬ್ಬರಿ 300 ಕೋಟಿ ರೂಪಾಯಿಗಳ ಆಸ್ತಿ ಮಾಲೀಕ. ಸದ್ಯ ನಮ್ಮ ರಾಜ್ಯದಲ್ಲೇ ವಾಸಿಸುತ್ತಿರುವ ಅವರು ಈ ಬಾರಿ ಚುನಾವಣೆಗೆ ಧುಮುಕಲಿದ್ದಾರೆ. ಸಿಂಗಸಂದ್ರದ ವೆಲ್ಲಿಂಗ್‌ಟೌನ್‌ನಲ್ಲಿ ವಾಸಿಸುತ್ತಿರುವ ಇವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕುಟುಂಬದಲ್ಲಿ ಬಡತನ ಇದ್ದಿದ್ದರಿಂದ ಅನಿಲ್‌ಕುಮಾರ್‌ ಕೇವಲ 3ನೇ ತರಗತಿಗೆ ವಿದ್ಯಾಭ್ಯಾಸ ಬಿಟ್ಟು, ವ್ಯಾಪಾರ ಪ್ರಾರಂಭಿಸಿದರು. ಬಹಳಷ್ಟು ದಿನಗಳ ಕಾಲ ಚಹ ಮಾರಿ ಜೀವನ ಸಾಗಿದ್ದಾರೆ. ಇದರಿಂದಲೇ ಅವರು ಮಾಸಿಕ ಆದಾಯವಾಗಿ 3 ಲಕ್ಷ ಸಂಪಾದಿಸುತ್ತಿದ್ದರು. ನಂತರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡು ಕೋಟ್ಯಧಿಪತಿ ಆಗಿದ್ದಾರೆ. ಪಿ.ಅನಿಲ್‌ಕುಮಾರ್‌ ಇವರ ಆಸ್ತಿಯ ಮೌಲ್ಯ ಕಂಡು ಬೆರಗಾದೆ ಇರುವವರಿಲ್ಲ.

ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಇವರ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಒಟ್ಟು 23 ಬ್ಯಾಂಕ್‌ ಖಾತೆಗಳಿವೆ. ಇದಲ್ಲದೆ 16 ಕಾರುಗಳೂ, 17 ಬೈಕ್‌ಗಳು, ಟ್ರ್ಯಾಕ್ಟರ್, ಜೆಸಿಬಿ, ಟ್ಯಾಂಕರ್ ಹಾಗೂ ಲಾರಿಯನ್ನೂ ಇಟ್ಟುಕೊಂಡಿದ್ದಾರೆ. ಇವುಗಳ ಮೌಲ್ಯವೇ 6.73 ಕೋಟಿ ರೂಪಾಯಿಗಳಾಗಿವೆ. ಅಲ್ಲದೆ 40.59 ಲಕ್ಷ ಮೌಲ್ಯದ ಚಿನ್ನಾಭರಣ, 5.2 ಲಕ್ಷ ನಗದು ಕೂಡ ಅನಿಲ್ ಕುಮಾರ್ ಹೊಂದಿದ್ದಾರೆ. ಇನ್ನು ಪತ್ನಿ ಸಂಧ್ಯಾ ಮತ್ತು ಮಕ್ಕಳ ಹೆಸರಿನಲ್ಲಿ ಸುಮಾರು 300 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 48.5 ಎಕರೆ ಜಮೀನು, 12,95,848 ಚ.ಅಡಿ ವಿಸ್ತೀರ್ಣದ ಭೂಮಿ ಸೇರಿ ಒಟ್ಟು 333 ಕೋಟಿ ಮಾರುಕಟ್ಟೆ ಮೌಲ್ಯದ ಆಸ್ತಿಯ ಮಾಲೀಕರು ಇವರು. ಸಿಂಗಸಂದ್ರದಲ್ಲಿ ವಾಣಿಜ್ಯ ಸಮುಚ್ಚಯ, ಅಪಾರ್ಟ್‌ಮೆಂಟ್‌ ಸಮುಚ್ಚಯ ಸಹ ಹೊಂದಿದ್ದಾರೆ.

LEAVE A REPLY

Please enter your comment!
Please enter your name here