ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯ ಕುರಿತಾದ ಬಯೋಪಿಕ್ ಸಿನೆಮಾ ಎಪ್ರಿಲ್ 5 ರಂದು ಬಿಡುಗಡೆಗೊಳ್ಳಲಿದ್ದು , ಬಿಡುಗಡೆಯನ್ನು ತಡೆಯಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಏಪ್ರಿಲ್ 8 ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ನ್ಯಾಯಮೂರ್ತಿ ಎಸ್.ಎ. ಬಾಬ್ಡೆ, ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಮತ್ತು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠವು  , ಕಾಂಗ್ರೆಸ್ ವಕ್ತಾರ ಅಮನ್ ಪನ್ವಾರ್ ಅವರು ಸಲ್ಲಿಸಿರುವ ತಡೆಯಾಜ್ಞೆ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದ್ದು , ಚುನಾವಣೆಗಿಂತ ಮುಂಚೆ ಮೋದಿಯ ಜೀವನಚರಿತ್ರೆಯ ಬಿಡುಗಡೆಯು ಚುನಾವಣಾ ನೀತಿ ಸಂಹಿತೆಯ ವಿರುದ್ಧ ಮತ್ತು ಜನರ ಭಾವನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅರ್ಜಿ ಪರ ವಕೀಲರು ವಾದಿಸಿದರು.

ತುರ್ತು ವಿಚಾರಣೆಗಾಗಿ ಮನವಿ ಮಾಡಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮಾತನಾಡುತ್ತಾ , ಲೋಕಸಭೆಗೆ ಚುನಾವಣೆ ನಡೆಯುವ ಈ ಸಮಯದಲ್ಲಿ ಆಡಳಿತ ಪಕ್ಷದ ಮೂವರು ಸದಸ್ಯರು ನಿರ್ಮಿಸಿರುವ ಈ ರಾಜಕೀಯ ಚಿತ್ರದ ಬಿಡುಗಡೆಯು ಚುನಾವಣಾ ಪರಿಶುದ್ಧತೆಗೆ ಮತ್ತು ಸಂವಿಧಾನಬದ್ದತೆಗೆ ತೊಂದರೆಯನ್ನುಂಟು ಮಾಡುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here