ನವದೆಹಲಿ : ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಈ ನಡುವೆ ಬಿಜೆಪಿ, ದೇಶದ ಮತದಾರರನ್ನು ಓಲೈಕೆ ಮಾಡುವ ದೃಷ್ಟಿಯಿಂದ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು ,ಇದನ್ನು ‘ಸಂಕಲ್ಪ ಪತ್ರ’ ಎಂದು ಕರೆದಿದ್ದಾರೆ

ವಿಶೇಷವಾಗಿ ಯಾವುದೇ ಹೊಸ ಅಂಶಗಳನ್ನೂ ಸೇರಿಸದೆ ಹಳೆಯ ಪ್ರಣಾಳಿಕೆಯನ್ನೇ ಹೊಸ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಿದ ಬಿಜೆಪಿಯು ರಾಮ ಮಂದಿರ ನಿರ್ಮಾಣ , ಜಮ್ಮು ಮತ್ತು ಕಾಶ್ಮೀರ ನಾಗರಿಕರಿಗೆ ವಿಶೇಷ ಅಧಿಕಾರ ನೀಡುವ ಕಲಂ 35 ಎ ರದ್ದು , ಏಕ ರೀತಿಯ ಸಿವಿಲ್ ಕೋಡ್ ಅನುಷ್ಠಾನ ಈ ಮುಂತಾದ ಹಳೆಯ ಜುಮ್ಲಾಗಳನ್ನು ಮತ್ತೆ ಜನತೆಯ ಮುಂದಿಟ್ಟಿದೆ. ಕಾರ್ಯಕ್ರಮದಲ್ಲಿ ಮಾತಾಡಿದ ಅಮಿತ್ ಷಾ , 130 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಉದ್ದೇಶವಿಟ್ಟು ಸಂಕಲ್ಪ ಪತ್ರ ರಚಿಸಲಾಗಿದೆ ಎಂದರು.

ಜೊತೆಗೆ ಕಿಸಾನ್ ಸಮ್ಮಾನ್ ಯೋಜನೆಯನ್ನು ವಿಸ್ತರಿಸುವುದು, ರೈತರ ಆದಾಯವನ್ನು ದ್ವಿಗುಣಗೊಳಿಸುವುದು , ರೈತರಿಗೆ ಬಡ್ಡಿ ರಹಿತ ಸಾಲ ಮುಂದಿನ 5 ವರ್ಷದಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಂಕಲ್ಪ , ಕೃಷಿ & ಗ್ರಾಮೀಣಾಭಿವೃದ್ಧಿಗಾಗಿ 25 ಲಕ್ಷ ಕೋಟಿ ರೂ. ಮೀಸಲು , ಜಿಎಸ್‌ಟಿ ಇನ್ನಷ್ಟು ಸರಳೀಕರಣ, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಪಿಂಚಣಿ ಪ್ರತಿ ಗ್ರಾಮಪಂಚಾಯಿತಿಗೆ ಹೈ ಸ್ಪೀಡ್​ ಇಂಟರ್ನೆಟ್​, ಅಡುಗೆ ಅನಿಲ ಸಂಪರ್ಕಕ್ಕೆ ಪೈಪ್ಲೈನ್​ ವ್ಯವಸ್ಥೆ , ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ, ಎಲ್ಲಾ ಮನೆಗಳಿಗೆ ವಿದ್ಯುತ್‌ ಮತ್ತು ಶೌಚಾಲಯ, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಯೋಜನೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕ್ರಮ, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು , ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಹೆಚ್ಚಳ , 2022ರ ವೇಳೆಗೆ ಎಲ್ಲಾ ರೈಲು ಮಾರ್ಗ ಬ್ರಾಡ್​ಗೇಜ್ , 75 ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಈ ಮುಂತಾದ ಅಂಶಗಳನ್ನೂ ಅಳವಡಿಸಲಾಗಿದ್ದು, ಇನ್ನೊಂದು ಅವಕಾಶ ಕೊಟ್ಟರೆ ಇದೆಲ್ಲವನ್ನೂ ಮಾಡಿ ತೋರಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟರು.

ಸಂಕಲ್ಪ ಪತ್ರದ ಪ್ರಮುಖ ಅಂಶಗಳು.

1• ಸಶಸ್ತ್ರ ಪಡೆಗಳನ್ನು ಬಲಪಡಿಸುವುದಕ್ಕಾಗಿ, ಅತ್ಯುತ್ತಮ ರಕ್ಷಣಾ ಸಲಕರಣೆಗಳ ಖರೀದಿ ಮಾಡಲಾಗುವುದು

2• ಭಯೋತ್ಪಾದನೆ ತಡೆಗೆ ಸೂಕ್ತ ಕಾನೂನು ಮತ್ತು ಭದ್ರತಾ ಪಡೆಗಳು ಮುಕ್ತವಾಗಿ ಕಾರ್ಯ ನಿರ್ವಹಿಸುವಂತೆ ಉತ್ತೇಜಿಸಲಾಗುವುದು

3• ದೇಶದಾದ್ಯಂತ ಹಂತ ಹಂತವಾಗಿ NRC (ನಾಗರಿಕರ ರಾಷ್ಟ್ರೀಯ ನೋಂದಣಿ) ಅನ್ನು ಜಾರಿಗೊಳಿಸಲಾಗುವುದು

4• ಈಶಾನ್ಯ ರಾಜ್ಯಗಳಲ್ಲಿ ನೆರೆ ದೇಶಗಳ ನಿರಾಶ್ರಿತರ ನುಸುಳುವಿಕೆಯನ್ನು ತಡೆಗಟ್ಟಲು ತಂತ್ರಜ್ಞಾನವನ್ನು ಬಳಸಲಾಗುವುದು, ಸ್ಮಾರ್ಟ್ ಫೆನ್ಸಿಂಗ್ ಬಳಕೆ.

5• ಸಂವಿಧಾನದ 370 ನೇ ವಿಧಿಯನ್ನು (ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ) ವಜಾಗೊಳಿಸುವುದು.

6• ಬಡ್ಡಿ ಮುಕ್ತ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳು, ಶೂನ್ಯ ಶೇಕಡ ಬಡ್ಡಿ ದರದಲ್ಲಿ ಒಂದು ಲಕ್ಷ ರೂ ವರೆಗೆ ಅಲ್ಪಾವಧಿಯ ಕೃಷಿ ಸಾಲ.

7• ಬಿಜೆಪಿ ಅಧಿಕಾರಕ್ಕೆ ಬಂದರೆ ತಕ್ಷಣವಾಗಿ ರಾಮ ಮಂದಿರವನ್ನು ನಿರ್ಮಿಸಲಾಗುವುದು.

8• ಮೂಲಭೂತ ಸೌಕರ್ಯ ಕ್ಷೇತ್ರದ ಅಭಿವೃದ್ದಿಗೆ 100 ಲಕ್ಷ ಕೋಟಿ ರೂ ವ್ಯಯ. 

ಈ ಮುಂತಾದ ಅಂಶಗಳನ್ನು ಸಂಕಲ್ಪ ಪತ್ರ ಹೊಂದಿದ್ದರೂ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ ಮತ್ತು ರಾಮ ಮಂದಿರದ ನಿರ್ಮಾಣಕ್ಕೆ ಈ ಬಾರಿ ಬಿಜೆಪಿ ಬದ್ಧವಾಗಿದೆ ಎಂದು ಗೃಹ ಸಚಿವರು ಇದೇ ಸಮಯ ಹೇಳಿದರು.

LEAVE A REPLY

Please enter your comment!
Please enter your name here