ಉಡುಪಿ : ಕರಾವಳಿಯ ಉಡುಪಿ ಜಿಲ್ಲೆಯ ಕಾಪುವಿನಿಂದ 5 ಕಿ.ಮೀ. ದೂರದಲ್ಲಿರುವ ಮಜೂರು ಮಸೀದಿ ಎಂದೇ ಪ್ರಸಿದ್ಧವಾಗಿರುವ ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಗೆ ಹಿಂದೂ ಶಿಲ್ಪಿಯೊಬ್ಬರು ಆಕರ್ಷಕ ರೀತಿಯ ಇಸ್ಲಾಂ ಶೈಲಿಯ ಮರದ ಕೆತ್ತನೆಯನ್ನು ಮಾಡುವ ಮೂಲಕ ಸಾಮರಸ್ಯ ಸಾರಿದ್ದಾರೆ.
ಕರಾವಳಿ ಭಾಗದಲ್ಲಿ ಅತಿ ಅಗತ್ಯವಾಗಿ ಬೇಕಾಗಿದ್ದ ವಿಶಿಷ್ಟ ರೀತಿಯ ಸೌಹಾರ್ದದ ವಾತಾವರಣ ಇದರಿಂದಾಗಿ ನಿರ್ಮಾಣವಾಗಿದೆ.

ಹಿಂದೂ ಮತವಿಶ್ವಾಸಿ ಆಗಿರುವ ಈ ಶಿಲ್ಪಿ (ಮರದ ಕೆತ್ತನೆಗಾರ) ಹರೀಶ್ ಆಚಾರ್ಯ ಉಳಿಯಾರು ಅವರದು ಕಾಪು ಪರಿಸರದಲ್ಲಿ ಚಿರ ಪರಿಚಿತ ಹೆಸರು. ಮಸೀದಿಯ ಒಳಗಿನ ಕೋಣೆಯ ಅವರ ಇಂಡೋ ಅರೆಬಿಕ್ ಶೈಲಿಯ ಅಂದವಾದ ಕೆತ್ತನೆಗೆ ಜಿಲ್ಲೆಯಾದ್ಯಂತ ಭಾರೀ ಪ್ರಶಂಸೆಗಳು ಹರಿದುಬಂದಿದ್ದು , ಕರಾವಳಿ ನೆಲದಂತೆಯೇ ವಿದೇಶಗಳಿಂದಲೂ ಬೇಡಿಕೆ ಬಂದಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಯಾವುದೇ ಮಸೀದಿಯಲ್ಲೂ ಕಾಣಸಿಗದಂತಹ ಕಲಾ ವೈಭವ ಮಜೂರು-ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಇದೆ. ಇದಕ್ಕಾಗಿ 1 ಸಾವಿರ ಸಿಎಫ್‌ಟಿಯಷ್ಟು ಸಾಗುವಾನಿ ಮರವನ್ನು ಉಪಯೋಗಿಸಲಾಗಿದ್ದು, ಮಸೀದಿ ವ್ಯಾಪ್ತಿಯೊಳಗಿನ 51 ಮನೆಗಳ ಜನರು 57 ಸಾಗುವಾನಿ ಮರಗಳನ್ನು ಒದಗಿಸಿದ್ದಾರೆ. ಮುಸ್ಲಿಮರು ಮಾತ್ರವಲ್ಲದೆ ಸ್ಥಳೀಯ ಹಿಂದೂ ಬಾಂಧವರೂ ಕೂಡ ತಾವು ಬೆಳೆಸಿದ ಸಾಗುವಾನಿ ಮರಗಳನ್ನು ನೀಡಿ ಸೌಹಾರ್ದ ಮೆರೆದಿದ್ದಾರೆ.

ಹರೀಶ್ ಆಚಾರ್ಯ ಅವರ ಕೈಚಳಕದಲ್ಲಿನ ಕೆತ್ತನೆ ಆಕರ್ಷಕವಾಗಿ ಮೂಡಿ ಬಂದಿದೆ. ಇವರು ತಮ್ಮದೇ ಕಲ್ಪನೆಯಲ್ಲಿನ ಮಸೀದಿ, ಮಿನಾರ್‌, ಗುಂಬಜ್ ಹೀಗೆ ವಿವಿಧ ಚಿತ್ರಗಳನ್ನು ಬಿಡಿಸಿ ಅದನ್ನು ಮಸೀದಿಯ ಆಡಳಿತ ಕಮಿಟಿಗೆ ನೀಡಿದ್ದರು. ಇದರಿಂದ ಪ್ರೇರಿತಗೊಂಡ ಆಡಳಿತ ಕಮಿಟಿ ಕೆತ್ತನೆಯ ಹೊಣೆಗಾರಿಕೆ ಹರೀಶ್ ಅವರಿಗೆ ಒಪ್ಪಿಸಿತ್ತು.
ಇಲ್ಲಿ ಕೆತ್ತಿಸಲಾದ ಶಿಲ್ಪದ ಕೆತ್ತನೆಗೆ ಉಡುಪಿ ಜಿಲ್ಲಾ ಖಾಝಿ ಹಾಜಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ಕೂಡ ಮೆಚ್ಚಿ, ಶ್ಲಾಘಿಸಿದ್ದಾರೆ.

ಕುದುರಿದ ಬೇಡಿಕೆ: ಮಸೀದಿಯ ಅಂದ ವೃದ್ಧಿಸಿದ ಹರೀಶ್ ಆಚಾರ್ಯ ಅವರಿಗೆ ಇದೇ ಮಾದರಿಯಲ್ಲಿ ಮಸೀದಿಯ ಒಳಾಂಗಣ ವಿನ್ಯಾಸ ಮಾಡಿಕೊಡುವಂತೆ ಈಗ ದೇಶ- ವಿದೇಶಗಳಿಂದಲೂ ಬೇಡಿಕೆಗಳು ಬರುತ್ತಿವೆ. ಈಚೆಗೆ ಮಸೀದಿಯಲ್ಲಿ ನಡೆದ ಸಮಾರಂಭಕ್ಕೆ ಬಂದಿದ್ದ ದುಬೈ ಉದ್ಯಮಿಯೊಬ್ಬರು ಹರೀಶ್‌ ಆಚಾರ್ಯ ಅವರಿಗೆ ಉಚಿತ ವೀಸಾದೊಂದಿಗೆ ದುಬೈಗೆ ಆಹ್ವಾನ ನೀಡಿದ್ದಾರೆ. ಅಲ್ಲೂ ಕೂಡ ಇದೇ ಶೈಲಿಯ ಮರದ ಕೆತ್ತನೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಹರೀಶ್‌ ಅವರ ಈ ಕುಸುರಿ ಕೆಲಸವನ್ನು ವೀಕ್ಷಿಸಿ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಸಹಿತ ವಿವಿಧೆಡೆಗಳ ಜಮಾತ್‌ನವರು ತಮ್ಮ ಊರಿನ ಮಸೀದಿ ನಿರ್ಮಾಣದಲ್ಲೂ ಕೆತ್ತನೆ ಕೆಲಸ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. 

ಇದರ ಬಗ್ಗೆ ಮಾತನಾಡಿದ ಹರೀಶ್ ಆಚಾರ್ಯ , ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಹಿತವಾಗಿ ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ಮರದ ಕೆತ್ತನೆ ಕೆಲಸ ಮಾಡಿದ್ದೇನೆ. ಆದರೆ, ಮಸೀದಿಯ ಕುಸುರಿ ಕೆಲಸ ಮಾಡಿದ್ದು ಇದೇ ಮೊದಲು. ಗುರುಗಳಾದ ಕೃಷ್ಣ ಆಚಾರ್ಯ ಮತ್ತು ಗಣಪತಿ ಆಚಾರ್ಯ ಅವರು ಕಲಿಸಿದ ವಿದ್ಯೆಯನ್ನು ಬಳಸಿಕೊಂಡು ನಾನೇ ಸ್ವತಃ ಚಿತ್ರಗಳನ್ನು ರಚಿಸಿ, ಅದನ್ನು ಧರ್ಮಗುರುಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಿದ್ದನ್ನು ಇಲ್ಲಿ ಕೆತ್ತಿದ್ದೇನೆ. 10 ತಿಂಗಳ ನಿರಂತರ ಕೆಲಸದ ವೇಳೆ ಎಲ್ಲರಿಂದಲೂ ಸಂಪೂರ್ಣ ಸಹಕಾರ ದೊರಕಿದೆ. ನನ್ನ ಕೆಲಸಕ್ಕೆ ಜನರಿಂದ ಉತ್ತಮ ಪ್ರಶಂಸೆ ದೊರಕಿದೆ’ ಎನ್ನುತ್ತಾರೆ ಹರೀಶ್ .

LEAVE A REPLY

Please enter your comment!
Please enter your name here