ಬೆಂಗಳೂರು, ಮೇ 21: ರಾಜ್ಯದಲ್ಲಿ ಮತ ಎಣಿಕೆಗೆ ಚುನಾವಣಾ ಆಯೋಗವು ಸಜ್ಜಾಗಿದ್ದು, ಚುನಾವಣಾ ಫಲಿತಾಂಶ ನಾಲ್ಕು ಗಂಟೆ ತಡವಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 40 ವಿವಿಪ್ಯಾಟ್ಗಳನ್ನು ಎಣಿಕೆ ಮಾಡಿ ತಾಳೆ ನೋಡಬೇಕಿರುವ ಕಾರಣ ಚುನಾವಣಾ ಫಲಿತಾಂಶವು ನಾಲ್ಕು ಗಂಟೆ ತಡವಾಗಲಿದೆ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ 28 ಮತ ಎಣಿಕೆ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. 11,000 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಮತ ಎಣಿಕೆಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೇ 23ರಂದು ಬೆಳಗ್ಗೆ 8 ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಬಳಿಕ ಇವಿಎಂಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ ಎಂದು ತಿಳಿಸಿದರು.
ಒಟ್ಟು 90,000 ಅಂಚೆ ಮತಗಳು ಬಂದಿದ್ದು, ಇವುಗಳ ಎಣಿಕೆ ಬೆಳಿಗ್ಗೆ 8 ಕ್ಕೆ ಪ್ರಾರಂಭವಾಗಲಿದೆ. 31 ಮತಗಟ್ಟೆಗಳಲ್ಲಿ ಅಣಕು ಮತದಾನದ ಮತಗಳನ್ನು ಸರಿಪಡಿಸಿಲ್ಲ. ಹಾಗಾಗಿ ಆ ಮತ ಯಂತ್ರಗಳನ್ನು ಪ್ರತ್ಯೇಕವಾಗಿ ಎಣಿಕೆ ಮಾಡಲಾಗುತ್ತದೆ.
ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಪ್ರಕಟಣೆ ಪ್ರಾರಂಭವಾಗುವ ನಿರೀಕ್ಷೆ ಇದೆ. ರಾತ್ರಿ ಏಳು ಗಂಟೆ ವೇಳೆಗೆ 28 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಬಹುದು. ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಆದಷ್ಟು ಬೇಗ ಫಲಿತಾಂಶ ಪ್ರಕಟಣೆ ಮಾಡಲು ಪ್ರಯತ್ನಿಸಲಿದ್ದೇವೆ ಎಂದು ಸಂಜೀವ್ ಕುಮಾರ್ ಹೇಳಿದರು.